Tuesday 22 March 2016

Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.
ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ. ಆ ಊರಿನಲ್ಲಿ ಬಾಬಾ ಬಾಲಾನಾಥ್ ಎಂಬ ಸಾಧುವೊಬ್ಬರು ವಾಸವಿದ್ದರಂತೆ. ಅವರ ಮನೆಗಿಂತ ಎತ್ತರದ ಮನೆ ಸುತ್ತ-ಮುತ್ತ ಎಲ್ಲಿಯೂ ಇರಬಾರದು. ಹಾಗೇನಾದರೂ ಯಾರಾದರೂ ಎತ್ತರದ ಮನೆ ಕಟ್ಟಿ ಅದರ ನೆರಳು ತನ್ನ ಮನೆಯ ಮೇಲೆ ಬಿದ್ದ ದಿನವೇ ಈ ಊರು ಪಾಳು ಬೀಳುತ್ತದೆ ಎಂದಿದ್ದರಂತೆ, ಅದನ್ನು ಮೀರಿದ್ದರಿಂದಾಗಿ ಈ ಊರಿಗೆ ಭೂತ ಮೆಟ್ಟಿಕೊಂಡಿದೆಯೆಂಬುದು ಒಂದು ಬದಿಯ ಕತೆ.  ಇನ್ನೊಂದು ಫೇಮಸ್ ವರ್ಶನ್ನಿನ ಪ್ರಕಾರ, ಆ ಊರಿನಲ್ಲಿದ್ದ ದುಷ್ಟ ಮಾಂತ್ರಿಕನಿಗೆ ರಾಜಕುಮಾರಿ ರತ್ನಾವತಿಯ ಮೇಲೆ ಮೋಹವಾಗುತ್ತದೆ. ಒಮ್ಮೆ ರಾಜಕುಮಾರಿ ತನ್ನ ಸಖಿಯರೊಡನೆ ವಿಹಾರಕ್ಕೆಂದು ಬಂದವಳು ಸುಗಂಧ ದ್ರವ್ಯವನ್ನು ಖರೀದಿಸಲು ಹೋಗುತ್ತಾಳೆ. ಆಗ ಈ ಮಾಂತ್ರಿಕ ಸುಗಂಧ ದ್ರವ್ಯದ ಜಾಗದಲ್ಲಿ ಆಕೆಯನ್ನು ವಶೀಕರಣ ಮಾಡಿಕೊಳ್ಳುವ ದ್ರವ್ಯವನ್ನಿರಿಸುತ್ತಾನೆ. ಸ್ವತಃ ತಂತ್ರ ವಿದ್ಯೆಗಳನ್ನು ಬಲ್ಲವಳಾಗಿದ್ದ ರಾಜಕುಮಾರಿ ಆ ದ್ರವ್ಯವನ್ನು ತೆಗೆದುಕೊಂಡು ಎದುರಿಗಿದ್ದ ಬಂಡೆಕಲ್ಲಿಗೆ ಎರಚುತ್ತಾಳೆ. ಮಾಂತ್ರಿಕನ ಮೋಹಕ್ಕೊಳಗಾದ ಬಂಡೆ ಆತನ ಮೇಲೆ ಉರುಳುತ್ತದೆ.ಸಾಯುವ ಮೊದಲು ಆ ಮಾಂತ್ರಿಕ ಈ ಊರು ನಾಶವಾಗಿ ಹೋಗಲಿ ಮತ್ತು ಈ ಕೋಟೆಯ ಒಳಗೆ ಯಾರು ವಾಸ ಮಾಡದಂತಾಗಲಿ ಎಂದು ಶಾಪವಿತ್ತನಂತೆ. ಅದಾಗಿ ಕೆಲವೇ ದಿನಗಳಲ್ಲಿ ಮೊಘಲರು ಈ ಕೋಟೆಯ ಮೇಲೆ ಆಕ್ರಮಣ ಮಾಡಿದ್ದರಂತೆ. ಈಗಲೂ ರಾಜಕುಮಾರಿ ಹಾಗೂ ಮಾಂತ್ರಿಕನ ಆತ್ಮಗಳು ಕೋಟೆಯೊಳಗಿವೆ ಮತ್ತು ರಾತ್ರಿಯ ವೇಳೆ ಅಲ್ಲಿ ಉಳಿಯಲು ಹೋದವರಿಗೆ ಉಳಿಗಾಲವಿಲ್ಲ ಎಂದೇ ಹೇಳಲಾಗುತ್ತದೆ. ರಾಜಸ್ಥಾನದ ಪ್ರವಾಸಕ್ಕೆ ಹೊರಟಾಗ ಇಂತಹ ಭೂತದ ಕೋಟೆಯನ್ನೂ, ಭೂತಗಳನ್ನೂ ನೋಡುವ ಕಾರ್ಯಕ್ರಮ ನಮ್ಮ ಪಟ್ಟಿಯಲ್ಲಿವಲ್ಲ ಅಂತೊಂದು ಕೊರಗಿತ್ತು ನನಗೆ. ಆದರೆ ಆ ಕೊರಗು ಬೇರೆ ರೀತಿಯಲ್ಲಿ ಪರಿಹಾರವಾಗುತ್ತದೆಂದು ತಿಳಿದಿರಲಿಲ್ಲ. ಜೈಸಲ್ಮೇರಿನ ಮರಳುಗಾಡಿನಲ್ಲಿ ನಾವು ಉಳಿದುಕೊಂಡಿದ್ದ ಜಾಗದ ಮಾಲೀಕನ ಜೊತೆ ರಾತ್ರಿ ಹರಟುತ್ತ, ಇಲ್ಲೇನಾದರೂ ಭೂತಗಳಿರುವ ಸ್ಥಳವಿದೆಯೇ ಅಂತ ಕೇಳಿದೆ. ಒಂದಿಡಿ ಊರೇ ಇದೇ ಸರ್ ! ಕುಲ್ಧರ ಅಂತ ಅದರ ಹೆಸರು. ಜೈಸಲ್ಮೇರಿನಿಂದ ವಾಪಸ್ ಇಲ್ಲಿಗೆ ಬರುವಾಗ ಸಿಗುತ್ತದೆ, ನಾಳೆ ನೋಡಬಹುದು ಎಂದರು. ಆ ಊರಿನಲ್ಲೇಕೆ ಭೂತಗಳಿವೆ ? ಏನು ಅದರ ಹಿಂದಿನ ಕತೆ ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದೆ. ಕತೆಯನ್ನು ಸಂಕ್ಷಿಪ್ತವಾಗಿ ಹೇಳತೊಡಗಿದರು. ಬಹಳ ಹಿಂದೆ ಆ ಊರಿನ ಕೆಳಜಾತಿಯ ಹುಡುಗನಿಗೂ ಮತ್ತು ಅದೇ ಊರಿನ ಶ್ರೀಮಂತನ ಮಗಳಿಗೂ ಪ್ರೇಮಾಂಕುರವಾಗಿತ್ತು. ಆದರೆ ದುರಾದೃಷ್ಟವಶಾತ್ ಈ ವಿಷಯ ಊರಿನವರಿಗೆ ತಿಳಿದು ಆ ಹುಡುಗನನ್ನು ಕೊಲೆಗೈದರು. ನಂತರ ಆ ಊರಿನಲ್ಲಿ ವಿಚಿತ್ರ ಘಟನೆಗಳು ನಡೆಯಲು ಶುರುವಾದವಂತೆ. ಇದು ಆ ಹುಡುಗನ ಪ್ರೇತಾತ್ಮದ ಕಾಟ ಎಂದು ಭಾವಿಸಿ ಹೆದರಿದ ಗ್ರಾಮಸ್ಥರು ಊರಿಗೇ ಊರನ್ನೇ ಖಾಲಿ ಮಾಡಿ ಹೊರಟುಹೋದರಂತೆ. ಈಗಲೂ ನೀವು ಪಾಳು ಬಿದ್ದ ಮನೆಗಳನ್ನು ನೋಡಬಹುದು ಎಂದರು. ಸರಿ ಎಂದೆ. ಸ್ವಲ್ಪ ಸಮಯದ ನಂತರ, ಅಲ್ಲಿಯೇ ಇದ್ದ ಇನ್ನೊಬ್ಬರ ಬಳಿ ಕೇಳಿದಾಗ ಅವರು ಹೆಚ್ಚು ಪ್ರಚಲಿತದಲ್ಲಿರುವ ಮತ್ತೊಂದು ವರ್ಶನ್ ಹೇಳಿದರು. ಹಿಂದೆ ಇದ್ದ ಕುಲ್ಧರ ಎಂಬ ಊರು ಈಗೀನ ಜೈಸಲ್ಮೇರ್ ನಗರಕ್ಕಿಂತಲೂ ದೊಡ್ಡ ಹಾಗೂ ಮುಖ್ಯ ಊರಾಗಿತ್ತಂತೆ. ಆ ಊರಿನಲ್ಲಿದ್ದ ಪಾಲಿವಾಲ್ ಬ್ರಾಹ್ಮಣರು ವ್ಯಾಪಾರ,ಕೃಷಿಯಲ್ಲಿ ಬಹಳ ಮುಂದುವರೆದವರಾಗಿದ್ದು ಯಥೇಚ್ಚವಾದ ಸಂಪತ್ತನ್ನುಗಳಿಸಿಕೊಳ್ಳುತ್ತಾ ಕುಲ್ಧರದ ಊರನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡಿದ್ದವರಂತೆ. ಜೈಸಲ್ಮೇರಿನ ರಾಜ ಇವರಿಗೆ ದುಪ್ಪಟ್ಟು ತೆರಿಗೆ ವಿಧಿಸಿ ಕಿರುಕುಳ ನೀಡುತಿದ್ದ. ಆ ಸಮಸ್ಯೆಯ ಜೊತೆಗೆ ಭೋನಸ್ ಎಂಬಂತೆ, ಆ ರಾಜ್ಯದ ದುರುಳ ಸೇನಾಧಿಪತಿಯ ಕಣ್ಣು ಕುಲ್ಧರ ಊರಿನ ಮುಖ್ಯಸ್ಥನ ಮಗಳ ಮೇಲೆ ಬೀಳುತ್ತದೆ. ನಿಗದಿತ ಗಡುವಿನೊಳಗೆ ನಿಮ್ಮ ಮಗಳನನ್ನು ನನಗೆ ಮದುವೆ ಮಾಡಿಕೊಡಬೇಕು ಇಲ್ಲದಿದ್ದರೆ ನನ್ನ ಕೋಪಕ್ಕೆ ಇಡೀ ಊರು ಗುರಿಯಾಗಬೇಕು ಎಂದು ಧಮಕಿ ಹಾಕಿ ಮರಳಿದ್ದನಂತೆ. ಈ ವಿಷಯವನ್ನು ಗುಪ್ತವಾಗಿ ರಾಜನ ಬಳಿಗೆ ಕೊಂಡೊಯ್ದು ನ್ಯಾಯ ಕೇಳಲಾಯಿತಾದರೂ ದುರ್ಬಲನಾಗಿದ್ದ ರಾಜನಿಗೆ ಸೇನಾಧಿಪತಿಯನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿರಲಿಲ್ಲವಂತೆ. ಚಿಂತೆಗೆ ಬಿದ್ದ ಊರಿನವರೆಲ್ಲಾ ಸಭೆ ಸೇರಿ ಈ ಊರನ್ನು ತೊರೆದು ಹೋಗುವುದೇ ಮಾರ್ಗವೆಂದು ನಿರ್ಧರಿಸಿ ರಾತ್ರೋ ರಾತ್ರಿ ಆದಷ್ಟು ಸಾಮಾನು, ಸರಂಜಾಮು, ಸಂಪತ್ತುಗಳನ್ನೆಲ್ಲ ತುಂಬಿಕೊಂಡು ಹೊರಟರಂತೆ. ಹಾಗೇ ಹೊರಟವರು ನಮ್ಮ ನಂತರ ಈ ಊರಿನಲ್ಲಿ ಯಾರು ಜೀವನ ನಡೆಸದಂತಾಗಿ ಈ ಊರು ಪಾಳು ಬೀಳಲಿ ಎಂದು ಶಾಪವನ್ನೂ ಹಾಕಿ ಜೊತೆಗೆ ತಂತ್ರ ವಿದ್ಯೆಗಳಿಂದ ಆತ್ಮಗಳನ್ನು ಬಿಟ್ಟರಂತೆ. ಆಗಿನಿಂದ ಈ ಊರು ಭೂತಗಳ ಊರಾಗಿ ಪಾಳು ಬಿದ್ದಿದೆಯಂತೆ. ಈಗಲೂ ರಾತ್ರಿ ವೇಳೆ ಅಲ್ಲಿ ಯಾರೂ ಉಳಿಯುವುದಿಲ್ಲ. ಕತೆಗಳನ್ನು ಕೇಳಿದ ನಂತರ ಈ ಊರನ್ನು ನೋಡಲೇಬೇಕು ಅಂತ ಅಂದುಕೊಂಡೆ. ಮರುದಿನ ಮಧ್ಯಾಹ್ನ ಜೈಸಲ್ಮೇರಿನ ಕೋಟೆ ನೋಡಿಕೊಂಡು ವಾಪಸ್ ಬರುವಾಗ ನಮ್ಮ ಡ್ರೈವರ್ ಅವರಿಗೆ ಕುಲ್ಧರಕ್ಕೆ ಹೋಗೋಣ ಎಂದೆ. ಜೊತೆಗಿದ್ದವರಿಗೇಕೋ ಭೂತಗಳನ್ನು ಭೇಟಿಯಾಗೋ ಮನಸ್ಸಿದ್ದಿರರಲಿಲ್ಲ. ಹಾಗಾಗಿ ಹಲವು ಸುತ್ತಿನ ಚರ್ಚೆಗಳ ನಂತರ ಕಡೆಗೂ ಅಲ್ಲಿಗೆ ಹೋದೆವು. ಭೂತಗಳನ್ನು ಹುಡುಕಿಕೊಂಡು ಬರುವವರು ಹೆಚ್ಚಾಗಿರುವ ಕಾರಣ ರಾಜಸ್ಥಾನ ಸರ್ಕಾರ ಈಗ ಆ ಊರಿನ ದೇವಸ್ಥಾನ ಮತ್ತು ಒಂದೆರಡು ದೊಡ್ಡ ಮನೆಗಳನ್ನು (ಬಹುಶಃ ಊರಿನ ಮುಖ್ಯಸ್ಥರ ಮನೆಗಳಿದ್ದಿರಬಹುದು) ರಿಪೇರಿ ಮಾಡಿದೆ. ಒಂದಷ್ಟು ಕುತೂಹಲ, ಭಂಡ ಧೈರ್ಯ , ಒಂದಷ್ಟು ಅಳುಕಿನಿಂದಲೇ ಊರಿನ ಒಳಕ್ಕೆ ಹೋದೆವು. ಈಗೀನ ಲೇ-ಔಟುಗಳಂತೆ ಪ್ಲಾನ್ ಮಾಡಿ ಇಟ್ಟಿಗೆಯಿಂದ ಕಟ್ಟಲಾಗಿರುವ ಸಾಲು ಮನೆಗಳು. ಚಾವಣಿಗಳೆಲ್ಲಾ ಕಾಲದ ಹೊಡೆತಕ್ಕೆ ಕುಸಿದು ಬಿದ್ದಿದ್ದವಾದರೂ, ಗೋಡೆಗಳು ಈಗಲೂ ಹಾಗೆ ಇವೆ. ಆ ದೊಡ್ಡ ಮನೆಗಳ ಒಳ ಹೊಕ್ಕರೇ ಕತೆ ಕೇಳಿದ್ದಕ್ಕೋ ಏನೋ ನನ್ನ ಮನಸ್ಸಿಗೆ ಅಲ್ಲೊಂದು ನೋವು, ಬೇಸರದ ಛಾಯೆ ಆವರಿಸಿರುವ ಅನುಭವವಾಯಿತು. ಹುಟ್ಟಿ ಬೆಳೆದು, ಬದುಕು ಕಟ್ಟಿಕಂಡ ಜಾಗವನ್ನು ರಾತ್ರೋರಾತ್ರಿ ಬಿಟ್ಟು ಹೊರಡುವಾಗ ಅವರಿಗೆಷ್ಟು ನೋವಾಗಿರಬಹುದು? ಬಹುಶಃ ಆ ದುಃಖದ ನಿಟ್ಟುಸಿರೇ ಅಲ್ಲಿನ ವಾತವರಣವನ್ನೆಲ್ಲಾ ಆವರಿಸಿದೆ ಎಂದೆನ್ನಿಸುತಿತ್ತು. ಆ ಮನೆಯೊಳಗೆ ಒಂದು ಸುರಂಗವಿತ್ತು. ಇಲ್ಲಿ ಅವರ ಸಂಪತ್ತುಗಳನ್ನು ಬಚ್ಚಿಡುತಿದ್ದರಂತೆ ಎಂದರು ನಮ್ಮ ಡ್ರೈವರ್. ಇಣುಕಿ ನೋಡಿದೆ ಕಗ್ಗತ್ತಲು. ಟಾರ್ಚ್ ಬೆಳಕನ್ನು ಒಳಗೆ ಬಿಟ್ಟು ನೋಡಿ ಇಳಿಯಬಹುದು ಎನಿಸಿತು. ಇಳಿದು ನೋಡೋಣ್ವಾ ಎಂದೆ. ಜೊತೆಗಿದ್ದವರೆಲ್ಲ ತೆಪ್ಪಗೆ ಬಾ ಎಂದು ನನ್ನ ಉತ್ಸಾಹಕ್ಕೆ ತಣ್ಣೀರೆರಚಿದರು. ಅವರಿಗ್ಯಾಕೋ ಕಾರು ಬಿಟ್ಟು ಇಳಿಯುವ ಮನಸ್ಸೇ ಇರಲಿಲ್ಲ. ನನಗೋ ಪ್ರತಿ ಮನೆಯೊಳಗೆ ಹೊಕ್ಕು, ಊರಿನ ಪ್ರತಿಮೂಲೆಯನ್ನು ನೋಡುವ ಸಾದ್ಯವಿದ್ದಲ್ಲಿ ದೆವ್ವಗಳನ್ನು ಕಾಣುವ ತವಕ. ಅಲ್ಲಿಂದ ಹೊರಡುವಾಗ ಪಾಲಿವಾಲ ಬ್ರಾಹ್ಮಣರಂತೆ ನನ್ನ ಮನಸ್ಸಿನ ತುಂಬಾ ಬೇಸರದ ಭಾವನೆ ಆವರಿಸಿಕೊಂಡಿತ್ತು. ನಾವು ಉಳಿದುಕೊಂಡಿದ್ದ ಜಾಗಕ್ಕೆ ಬಂದ ನಂತರ ನಮ್ಮ ನಾಲ್ಕು ಜನರಲ್ಲಿ ಇಬ್ಬರು ಅದ್ಯಾಕೋ ಸುಸ್ತಾಗ್ತಿದೆ ಅಂತ ಮಲಗಿಕೊಂಡರೇ, ಒಬ್ಬ ಹೊರಗೇ ಹೋಗೋ ಮೂಡ್ ಇಲ್ಲ ಎಂದ. ಕೊನೆಗೂ ನನಗೆ ಭೂತ ದರ್ಶನವಾಗಲಿಲ್ಲ ಅಂತ ಬೇಸರವಾಗಿತ್ತು. ಹೋಗಿದ್ದು ಮಟ ಮಟ ಮಧ್ಯಾಹ್ನವಾಗಿದ್ದರಿಂದ ಭೂತ ದರ್ಶನವಾಗಲಿಲ್ಲ ಬಹುಶಃ ನನ್ನ ಭಾಗ್ಯದಲ್ಲಿ ಬುದ್ಧಿಜೀವಿಗಳ ದರ್ಶನ ಮಾತ್ರವೇ ಬರೆದಿರುವುದು ಎನಿಸಿತು. ಅಲ್ಲಿಂದ ವಾಪಸ್ ಬರುವಾಗ ಡ್ರೈವರ್ ಆ ಊರಿನಲ್ಲಿ ನಡೆದ ಇನ್ನೊಂದು ಘಟನೆಯ ಬಗ್ಗೆ ಹೇಳಿದ. ಆ ಊರಿನಲ್ಲಿ ಈಗಲೂ ಪಾಲಿವಾಲ್ ಬ್ರಾಹ್ಮಣರು ಬಚ್ಚಿಟ್ಟಿರುವ ಸಂಪತ್ತಿದೆ ಎಂದು ತಿಳಿದುಕೊಂಡಿದ್ದ ವಿದೇಶಿಗನೊಬ್ಬ ಸನ್ಯಾಸಿಯ ವೇಷದಲ್ಲಿ ಇಲ್ಲಿ ಓಡಾಡುತ್ತಿದ್ದನಂತೆ. ಒಂದೆರಡು ಕಡೆ ಗುಂಡಿಯನ್ನು ತೆಗೆದಿದ್ದನಂತೆ. ಆ ನಂತರ ವಿಷಯ ಬಯಲಾಗಿ ಈಗ ಸರ್ಕಾರ ಅಲ್ಲೊಬ್ಬ ಸೆಕ್ಯುರಿಟಿ ಗಾರ್ಡ್ ನೇಮಕ ಮಾಡಿದೆ. ಇನ್ನು ಕುಲ್ಧರಲ್ಲಿ ನಿಜವಾಗಲೂ ವಿಚಿತ್ರ ಅನುಭವಗಳಾಗುತ್ತವೆಯೇ ಎಂದು ಪರಿಕ್ಷೀಸಲು ದೆಹಲಿಯ ಪಾರಾನಾರ್ಮಲ್ ಸೊಸೈಟಿಯವರು ಆಧುನಿಕ ಉಪಕರಣಗಳ ಜೊತೆಗೆ ಒಂದು ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರಂತೆ. ಅಲ್ಲಿ ಅವರಿಗೆ ವಿಚಿತ್ರ ಅನುಭವಗಾಳಗಿದ್ದನ್ನು ಹೇಳಿಕೊಂಡಿದ್ದಾರೆ. ಯಾರೋ ಚಲಿಸಿದಂತಾಗುವುದು, ಹಿಂದಿನಿಂದ ಬಂದು ಮುಟ್ಟಿದ ಅನುಭವ, ಕಾಲಳತೆಯ ದೂರದಲ್ಲೇ ವಾತವರಣದ ವ್ಯತ್ಯಾಸವಾಗುವುದು ಇತ್ಯಾದಿ. ಕಡೆಗೂ ಅಲ್ಲಿ ದೆವ್ವವಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲವಂತೆ. ಇದನ್ನು ಓದಿದ ಮೇಲೆ ಭೂತಗಳ ಇರುವಿಕೆಯನ್ನು ನೀವು ನಂಬುತ್ತೀರಾ ಎನ್ನುವುದು ನಿಮ್ಮ ಪ್ರಶ್ನೆಯಾದರೇ, ಬುದ್ಧಿಜೀವಿಗಳಲ್ಲಿ ಬುದ್ಧಿ ಇದೆ ಎಂದು ನೀವು ನಂಬುವುದಾದರೇ ಕಣ್ಣಿಗೆ ಕಾಣದ ಭೂತಗಳೂ ಇವೆ ಎಂದೂ ನಂಬಬಹುದಲ್ಲವೇ? ಅಷ್ಟಕ್ಕೂ ಕೆಲ ವಿಷಯಗಳು ಅನುಭವಕ್ಕೆ ಬಂದಾಗಲೇ ಅರಿವಾಗುವುದು. ನನಗೆ ಅಂತ ಅನುಭವಗಳಾಗಿರುವುದರಿಂದ ನಮ್ಮ ಕಣ್ಣಿಗೆ ನಿಲುಕದ ಶಕ್ತಿಗಳಿವೆ ಎಂದು ನಂಬುತ್ತೇನೆ. ಬುದ್ಧಿಜೀವಿಗಳ ಕಿರುಚಾಟ, ಅರಚಾಟ, ಕಂಡೋರ ಮಕ್ಕಳನ್ನು ಹಾಳು ಬಾವಿಗೆ ತಳ್ಳುವ ಭೀಕರ ಮನಸ್ಥಿತಿಯನ್ನು ಹತ್ತಿರದಿಂದ ನೋಡಿದವರಿಗೆ ಭೂತ ಭಯಬೀಳಿಸುವುದಿಲ್ಲ ಬಿಡಿ. ಹಾಗಾಗಿ ಭೂತಗಳನ್ನು ನೋಡಬೇಕೆಂಬ ಆಸೆ ನನ್ನಲ್ಲಿನ್ನು ಉಳಿದುಕೊಂಡಿದೆ. ಹಾಗೇನಾದರೂ ಕಾಣಿಸಿದ ದಿನ ಆ ಅನುಭವಗಳನ್ನು ದಾಖಲಿಸುತ್ತೇನೆ. ಅಂದ ಹಾಗೆ ನಿಮಗೇನಾದರೂ ವಿಚಿತ್ರ ಶಕ್ತಿಗಳ ಅನುಭವಗಾಳಗಿವೆಯೇ? ಪಾರಾನಾರ್ಮಲ್ ಸೊಸೈಟಿಯವರು ದಾಖಲಿಸಿರುವ ವೀಡಿಯೋವನ್ನು ಇಲ್ಲಿ ನೋಡಬಹುದು ( ಕುಲ್ಧಾರ ದೆವ್ವಗಳು )

ಕೃಪೆ - ರಾಕೇಶ್ ಶೆಟ್ಟಿ ( ನಿಲುಮೆ ಬಳಗ)

No comments:

Post a Comment