Saturday 26 March 2016

ಅತಿಶಯ ಶಕ್ತಿಯ ಹುಡುಕಾಟದಲ್ಲಿ...

" ದೆವ್ವ/ಭೂತ " ಈ ಪದ ಕೇಳಿದರೆ ಏನೊ ಒಂದು ರೋಮಾಂಚನ. ಈ ದೆವ್ವ/ಭೂತ ಇದೆಯೋ ಇಲ್ಲವೊ ಎಂಬುದು ಒಂದು ತರ್ಕಕ್ಕೆ ಬಿಟ್ಟ ವಿಚಾರ.  ಈ ಲೇಖನದಲ್ಲಿ ನನ್ನ ಒಂದು ಸ್ವಂತ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳ ಬಯಸುತ್ತೇನೆ.


ಅದು 2014 ಮಾರ್ಚಿ ತಿಂಗಳು, ನಾನು MCA ಓದೊದಕ್ಕೆ ಅಂತ ಕೆಂಗೇರಿಯ ಸಮೀಪ ಇರೋ ಹೆಚ್.ಗೊಲ್ಲಹಳ್ಳಿಯಲ್ಲಿ ನನ್ನ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದೆ. ಒಂದು ಮಧ್ಯಾಹ್ನ ನನ್ನ ಸ್ನೇಹಿತರ ಜೊತೆ ಮಾತನಾಡುತ್ತಾ ಈ ದೆವ್ವದ ವಿಚಾರ ಬಂತು. ನಮ್ಮ ಊರಿಗೆ ಸಮೀಪ ಇರೋ ನೈಸ್ ರೊಡಿನಲ್ಲಿ ಅಪಘಾತಗಳು ಸರ್ವೇ ಸಾಮನ್ಯ. ಹೀಗೆ ಅಪಘಾತದಲ್ಲಿ ಸತ್ತ ವ್ಯಕ್ತಿಗಳು ದೆವ್ವವಾಗಿ ದಾರಿಹೊಕರ ಬಲಿ ತೆಗೆದುಕೊಳ್ಳುತ್ತವೆ ಎಂಬುದು ಅಲ್ಲಿನ ಸ್ಥಳೀಯರ ವಾದ. ನನ್ನ ಸ್ನೇಹಿತರು ಈ ವಿಚಾರವನ್ನು ಬಹಳವಾಗಿ ನಂಬಿದ್ದರು ಮತ್ತು ರಾತ್ರಿಯ ವೇಳೆ ಓಡಾಡಲು ಬಹಳ ಹೆದರುತ್ತಿದ್ದರು. ವಾಸ್ತವವಾದಿಯಾದ ನಾನು ದೆವ್ವ/ಭೂತದ ಅಸ್ತಿತ್ವವನ್ನು ಪರಾಮರ್ಶಿಸದೆ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇದೇ ವಿಷಯಕ್ಕೆ ನನ್ನ ಮತ್ತು ನನ್ನ ಸ್ನೇಹಿತರ ನಡುವೆ ಒಂದು ಸ್ಪರ್ಧೆ ಏರ್ಪಟ್ಟಿತ್ತು ಅದೇನೆಂದರೆ ನಾನು ನಡುರಾತ್ರಿ ನೈಸ್ ರೋಡ್ ಮುಖ್ಯ ಕಛೇರಿಯಿಂದ (ಚೆನ್ನವೀರಯ್ಯನ ಪಾಳ್ಯ, ಹೊಸೂರು ರಸ್ತೆ) ನಮ್ಮ ಮನೆಗೆ ನಡೆದು ಬರಬೇಕು ಎಂದು. ಈ ನಡುವೆ ಎಂಥಾ ದೈರ್ಯವಂತರನ್ನು ಹೆದರಿಸುವಂತ ಮೂರು ಸ್ಥಳಗಳು ಮಾರ್ಗ ಮಧ್ಯೆ ಬರುತ್ತವೆ. ನೈಸ್ ಕೇಂದ್ರ ಕಛೇರಿಯ ರಸ್ತೆ, ಮಾವಿನ ತೋಟ ಮತ್ತು ಗೊಲ್ಲಹಳ್ಳಿ ಕೆರೆ.


ನೈಸ್ ಮುಖ್ಯ ಕಛೇರಿಯ ರಸ್ತೆ

ಸರಿಯೆಂದು ನಾನು ಸವಾಲು ಸ್ವೀಕರಿಸಿದೆ ಹಾಗು ನನ್ನ ಜೊತೆ ಮತ್ತೊಬ್ಬ ಸ್ನೇಹಿತ ಬರೊಕೆ ಒಪ್ಪಿದ. ಅಂದು ರಾತ್ರಿ ಸರಿಸುಮಾರು ೧೧ ಘಂಟೆ ಸಮಯ ನಾನು ಮತ್ತು ನನ್ನ ಸ್ನೇಹಿತ ಇಬ್ಬರು ನೈಸ್ ರೊಡಿಗೆ ನಡೆದುಕೊಂಡು ಹೊದೆವು. ನಾವು ನೈಸ್ ರೋಡ್ ತಲುಪುವ ಹೊತ್ತಿಗೆ ಸಮಯ ೧೧:೩೦ ದಾಟಿತ್ತು, ಅಲ್ಲಿಂದ ನಮ್ಮ ಇತರ ಸ್ನೇಹಿತರಿಗೆ ಫೊನ್ ಮಾಡಿ ತಾವು ಜಾಗ ತಲುಪಿರುವ ಬಗ್ಗೆ ಮಾಹಿತಿ ನೀಡಿದೆವು ಮತ್ತು ೧೨ ಘಂಟೆಗೆ ಸರಿಯಾಗಿ ನಾವು ತಿರುಗಿ ಬರುತ್ತೇವೆ ಎಂದು ತಿಳಿಸಿದೆವು. ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಹೊರಟೆವು. ನೈಸ್ ಕೇಂದ್ರ ಕಛೇರಿ ರಸ್ತೆಯಿಂದ ಹೊರಟ ನಮಗೆ ಯಾವುದೇ ಭಯ ಇರಲಿಲ್ಲ ದೈರ್ಯ ಮತ್ತು ಆತ್ಮಸ್ಥೈರ್ಯದಿಂದ ಹೊರಟೆ ನಮಗೆ ಚೆನ್ನವೀರಯ್ಯನ ಪಾಳ್ಯ ಬರುವ ಹೊತ್ತಿಗೆ ಏನೋ ಭಯ ಆವರಿಸಿತ್ತು.


ರಸ್ತೆ ಬದಿಯ ಮಾವಿನ ತೋಟ


ನಿಶ್ಯಬ್ದ ವಾತಾವರಣ, ಅತೀವ ಕತ್ತಲು ಮತ್ತು ನಾಯಿ-ಗೂಬೆಗಳ ಆರ್ತನಾದ ಇದಿಷ್ಟು ಸಾಕಲ್ಲವೆ ಭಯ ಹುಟ್ಟಿಸಲು.?   ಮೊಬೈಲ್ ಟಾರ್ಚ್ ನ ಬೆಳಕು ನಮಗೆ ಸಣ್ಣಗೆ ದಾರಿ ತೊರುತ್ತಿತ್ತು. ಚನ್ನವೀರಯ್ಯನ ಪಾಳ್ಯ ದಾಟಿ ಮಾವಿನ ತೋಟದ ಹತ್ತಿರ ಬಂದಾಗ ಯಾರೋ ನಮ್ಮನ್ನು ಹಿಂಬಾಲಿಸಿ ಬರೂ ಅನುಭವವಾಯಿತು. ತಿರುಗಿ ನೋಡಿದರೆ ಯಾರು ಇಲ್ಲ, ಸ್ವಲ್ಪ ಭಯ ಮತ್ತು ಹೆಚ್ಚಿದ ಹೃದಯ ಬಡಿತ. ಹಾಗೆ ಮಾವಿನ ತೋಟದ ಮದ್ಯಕ್ಕೆ ಬರುವ ಸಮಯ ಯಾರೊ ಚೀರುವ ದ್ವನಿ ನಮ್ಮನ್ನು ತಬ್ಬಿಬ್ಬು ಮಾಡಿತ್ತು, ಊರಿನಿಂದ ತುಂಬಾ ದೂರ ಮತ್ತು ನಿರ್ಜನ ಪ್ರದೇಶ, ಕೂಗಿದರು ಯಾರು ಸಹಾಯಕ್ಕೆ ಬರದಂತಹ ಜಾಗ. ಭಯದಲ್ಲಿ ಕೈ-ಕಾಲು ನಡುಕ ಶುರುವಾಗಿತ್ತು. ನನ್ನ ಸ್ನೇಹಿತ ಅಂತೂ ಭಯದಲ್ಲಿ ಬೆವತು ಹೊಗಿದ್ದ ಹೇಗಾದರು ಊರು ಸೇರಿದರೆ ಸಾಕೆನ್ನುವ ತವಕ. ಯಾಕಾದರು ಈ ಪಂದ್ಯಕ್ಕೆ ಒಪ್ಪಿಕಂಡೆವೊ ಎಂದು ನಮ್ಮನ್ನು ನಾವೇ ಶಪಿಸುತ್ತಾ ಹಾಗೆ ಊರಿನ ದಾರಿ ಹಿಡಿದೆವು. ನಮ್ಮ ಮುಂದಿನ ಪಯಣ ಕೆರೆ ಏರಿ ದಾಟುವುದು, ಅದು ನಮಗೆ ಇನ್ನೊಂದು ಜನ್ಮ ಪಡೆದಂತೇ ಸರಿ.



ಕೆರೆಯ ಏರಿ (ಕಾಲ್ಪನಿಕ ಚಿತ್ರ)


ಕೆರೆ ಸಮೀಪ ಬರುವ ಹೊತ್ತಿಗೆ ಪ್ರಾಣಹೊದ ಅನುಭವ. ಮನದಲ್ಲಿ ಏನೋ ಸಂಕಟ ಕೆರೆ ಏರಿ ತಲಿಪಿದ ನಮಗೆ ಕೆರೆ ನೋಡಲು ಭಯ. ಕಣ್ಣುಮುಚ್ಚಿ-ತೆರೆದು ಕೈ ಕೈ ಹಿಡಿದು ನಡೆಯಲು ಪ್ರಾರಂಭಿಸಿದೆವು. ಈ ನಡುವೆ ಕೆರೆಯ ಬದಿಯಲ್ಲಿ ಒಂದು ಬೆಳಕು ನಮ್ಮನ್ನೇ ಹಿಂಬಾಲಿಸಿ ಬರುತ್ತಿತ್ತು, ಭಯದಿಂದ ನಮ್ಮ ವೇಗ ಹೆಚ್ಚಿಸಿದೆವು. ಹಾಗೋ ಹೀಗೊ ನಮ್ಮ ಊರು ತಲುಪಿದೆವು. ಅಲ್ಲಿ ನಮಗಾಗಿ ಇತರ ಸ್ನೇಹಿತರು ನಮ್ಮ ಬರುವಿಕೆಗಾಗಿ ಕಾದು ನಿಂತಿದ್ದರು. ನಮ್ಮನ್ನು ಆತ್ಮೀಯತೆಯಿಂದ ಸ್ವಾಗತಿಸಿ ನಮ್ಮ ಅನುಭವದ ಬಗ್ಗೆ ವಿಚಾರಿಸಿದರು. ನಾವು ಅವರ ಬಳಿ ನಮಗೆ ಮಾವಿನ ತೋಟದಲ್ಲಿ ನಮ್ಮನ್ನು ಯಾರೊ ನಡೆದು ಹಿಂಬಾಲಿಸಿದ ಅನುಭವ ಮತ್ತು ಕೆರೆಯ ಏರಿಯ ಮೇಲೆ ನಮ್ಮನ್ನು ಹಿಂಬಾಲಿಸಿದ ಬೆಳಕಿನ ಬಗ್ಗೆ ವಿವರವಾಗಿ ಹೇಳಿದೆವು. ಭಯದಲ್ಲಿ ನಡುಗುತ್ತಿದ್ದ ನಮ್ಮನ್ನ ನೋಡಿದ ಅವರು ಮಾವಿನ ತೋಟದಲ್ಲಿ ನಡದಾಡಿದ ಮತ್ತು ಕೆರೆಯ ಏರಿಯಲ್ಲಿ ನೋಡಿದ ಬೆಳಕಿನ ಬಗ್ಗೆ ತಿಳಿಸಿದರು. ಮಾವಿನ ತೋಟದಲ್ಲಿ ನಮ್ಮನ್ನು ಹಿಂಬಾಲಿಸಿದ ಹೆಜ್ಜೆ ನಮ್ಮ ಸ್ನೇಹಿತರದ್ದೇ ಹಾಗಿತ್ತು. ನಮಗಿಂತ ಮೊದಲೆ ಮಾವಿನ ತೋಟದಲ್ಲಿ ಅವಿತು ನಮ್ಮ ಬರುವಿಕೆಯನ್ನೇ ಕಾದು ಹೆಜ್ಜೆ ಸಪ್ಪಳ ಮಾಡಿದ್ದು ಬಯಲಾಯಿತು, ಕೆರೆಯ  ಬದಿಯಲ್ಲಿ ಟಾರ್ಚ್ ಮುಖಾಂತರ ಬೆಳಕು ಹರಿಸಿದ್ದು ಅವರೇ ಎಂದು ಒಪ್ಪಿಕೊಂಡರು. ಅಂದು ತುಸು ಜಂಬದಿಂದಲೆ ಗೆದ್ದಿದ್ದು ನಾವೇ ಎಂದು ಮೀಸೆ ತಿರುಗುತ್ತಾ ನಮ್ಮ ಮನೆಯ ಕಡೆ ನಡೆದೆವು. ಇದಾದ ಕೆಲವು ದಿನ ಅದೇ ನೆನೆಪು ಬೆಂಬಿಡದಂತೆ ನಮ್ಮನ್ನು ಕಾಡುತ್ತಿತ್ತು. ನಿದ್ದೆಯಿಲ್ಲದ ರಾತ್ರಿಗಳು, ದೆವ್ವ ಭೂತದ ಇರುವಿಕೆ/ಇಲ್ಲದಿರುವಿಕೆ, ಯಾವುದು ಸತ್ಯ? ಯಾವುದು ಸುಳ್ಳು? ಈ ಎಲ್ಲಾ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗೆ ಉಳಿದವು.

ನನಗೆ ಇದು ಒಂದು ಹೊಸ ಅನುಭವವಾಗಿದ್ದು, ಮತ್ತು ಬಹಳ ರೋಚಕತೆಯಿಂದ ಕೂಡಿತ್ತು.

ನಿಮಗೆ ಇದರಿಂದ ಏನಾದರು ರೋಮಾಂಚನ ಹಾಗಿದ್ದರೆ ಕೆಳಗೆ ಕಾಮೆಂಟ್ ಮಾಡಿ, ಏನಾದರು ತಪ್ಪುಗಳಿದ್ದರೆ ತಿಳಿಸಿ. ಮುಂದಿನ ಲೇಖನದಲ್ಲಿ ಸರಿಪಡಿಸಲು ನನಗೆ ಸಹಕಾರಿಯಾಗುತ್ತದೆ.

ಧನ್ಯವಾದಗಳು

-ಮಧುಸೂದನ್ (maddy)

3 comments:

  1. ಯಾವ ವಿಷಯವು ನಮಗೆ ಗೊತ್ತಿರುವುದಿಲ್ಲವೊ ಅದರ ಬಗ್ಗೆ ನಮಗೆ ಯಾವ ಅಂಜಿಕೆ ಇರುವುದಿಲ್ಲ. ನಿಮಗೆ ವಿಷಯ ತಿಳಿಸಿ ಚ್ಯಾಲೆಂಜ ಹಾಕಿರುವುದರಿಂದ ಭಯ ಹುಟ್ಟಿದ್ದು. ಅದಿಲ್ಲವಾದರೆ ಆರಾಮಾಗಿ ಸರಿ ರಾತ್ರಿಯಾದರೂ ಹೋಗುತ್ತಿದ್ದಿರಿ. ಇಂಥ ಅನುಭವ ನನಗೂ ಆಗಿದೆ. ಆದರೆ ಏನೂ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯಿತು ಭಯ ಶುರುವಾಯಿತು. ನಂಬಿಕೆಯಲ್ಲಿ ಎಲ್ಲ ಅಡಗಿದೆ. ಇದು ನನ್ನ ಅನಿಸಿಕೆ.

    ReplyDelete
  2. ಯಾವ ವಿಷಯವು ನಮಗೆ ಗೊತ್ತಿರುವುದಿಲ್ಲವೊ ಅದರ ಬಗ್ಗೆ ನಮಗೆ ಯಾವ ಅಂಜಿಕೆ ಇರುವುದಿಲ್ಲ. ನಿಮಗೆ ವಿಷಯ ತಿಳಿಸಿ ಚ್ಯಾಲೆಂಜ ಹಾಕಿರುವುದರಿಂದ ಭಯ ಹುಟ್ಟಿದ್ದು. ಅದಿಲ್ಲವಾದರೆ ಆರಾಮಾಗಿ ಸರಿ ರಾತ್ರಿಯಾದರೂ ಹೋಗುತ್ತಿದ್ದಿರಿ. ಇಂಥ ಅನುಭವ ನನಗೂ ಆಗಿದೆ. ಆದರೆ ಏನೂ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯಿತು ಭಯ ಶುರುವಾಯಿತು. ನಂಬಿಕೆಯಲ್ಲಿ ಎಲ್ಲ ಅಡಗಿದೆ. ಇದು ನನ್ನ ಅನಿಸಿಕೆ.

    ReplyDelete
    Replies
    1. ಭಯದ ಜೊತೆ ಸತ್ಯ ತಿಳಿಯುವ ಕಾತುರ. ಇದೆ-ಇಲ್ಲದರ ನಡುವಿನ ಪರಿಕಲ್ಪನೆ ಎಲ್ಲಾ ಒಂದುಗೂಡಿ ಹೊಸ ಅನುಭವ ಸಿಕ್ಕಿತು.

      Delete